ಅಥಣಿ: ಅಥಣಿ ಪಟ್ಟಣದ ವಾರ್ಡ್ಗಳ ಸೌಂದರ್ಯೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಯುವ ನಾಯಕ ಚಿದಾನಂದ ಸವದಿ ಹೇಳಿದರು.
ಅಥಣಿ ಪಟ್ಟಣದ ವಾರ್ಡ್ ನಂ.2ರಲ್ಲಿ 2026-27ನೇ ಸಾಲಿನ ಪುರಸಭೆ ಅನುದಾನದಡಿ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸ್ವಾಗತ ಕಮಾನ್ ಕಾಮಗಾರಿಗೆ ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ ಅವರು, ಯುವ ನಾಯಕ ಚಿದಾನಂದ ಸವದಿ ಹಾಗೂ ಪುರಸಭೆ ಸದಸ್ಯರ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿದಾನಂದ ಸವದಿ, ವಾರ್ಡ್ ನಂ.2ರ ಮುಖ್ಯ ಪ್ರವೇಶ ದ್ವಾರದಲ್ಲಿ ನಿರ್ಮಿಸಲಾಗುತ್ತಿರುವ ಸ್ವಾಗತ ಕಮಾನ್ ವಾರ್ಡ್ನ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಪಟ್ಟಣದ ಅಭಿವೃದ್ಧಿಯ ಸಂಕೇತವಾಗಲಿದೆ. ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಹೇಳಿದರು.
ಅಥಣಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪುರಸಭೆ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಾರ್ಡ್ನ ಅಗತ್ಯಕ್ಕೆ ಅನುಗುಣವಾಗಿ ಸಿಸಿ ರಸ್ತೆ, ಚರಂಡಿ, ಎಲ್ಇಡಿ ಬೀದಿ ದೀಪ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಚಿದಾನಂದ ಸವದಿ ತಿಳಿಸಿದರು.
ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ ಮಾತನಾಡಿ, ವಾರ್ಡ್ ನಂ.2ರ ಪ್ರಮುಖ ಪ್ರವೇಶ ದ್ವಾರದಲ್ಲಿ 10 ಲಕ್ಷ ವೆಚ್ಚದಲ್ಲಿ ಆಕರ್ಷಕ ಸ್ವಾಗತ ಕಮಾನ್ ನಿರ್ಮಿಸಲಾಗುತ್ತಿದೆ. ವಾರ್ಡ್ನ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು. ಸಾರ್ವಜನಿಕರ ಸಹಕಾರದೊಂದಿಗೆ ವಾರ್ಡ್ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ದಿಲೀಪ್ ಲೋಣಾರೆ ಮಾತನಾಡಿ, ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ನಿರ್ದೇಶನದಂತೆ ಪುರಸಭೆ ಅನುದಾನವನ್ನು ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಂಡು ವಾರ್ಡ್ನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದತ್ತಾ ವಾಸ್ಟರ್, ದಿಲೀಪ್ ಲೋಣಾರೆ, ರಾಜು ಬುಲಬುಲೆ, ರಾಜು ಗುಡೋದಗಿ, ಮಲ್ಲು ಹುದ್ದಾರ, ಸಯ್ಯದ ಅಮೀನ ಗದ್ಯಾಳ, ರಿಯಾಜ್ ಸನದಿ, ಮಲ್ಲು ಬೂಟಾಳಿ, ಉದಯ ಸೊಳಸಿ, ಬಾಬು ಖೇಮಲಾಪುರ, ಆಸಿಫ್ ತಾಂಬೊಳಿ, ಬೀರಪ್ಪ ಯಂಕಚ್ಚಿ, ಪ್ರಮೋದ ಬಿಳ್ಳೂರ, ಸುಧೀರ ಮಡ್ಡಿ, ಸಿದ್ಧಾರ್ಥ ಮಡ್ಡಿ, ಗುತ್ತಿಗೆದಾರ ತಿಪ್ಪಣ್ಣ ಭಜಂತ್ರಿ, ಮಂಜು ಭಜಂತ್ರಿ, ಆನಂದ ಮಾದಗುಡಿ ಸೇರಿದಂತೆ ಪುರಸಭೆ ಸದಸ್ಯರು, ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

